ಕಡಲ ತುಂಟ ಕೂಸು
ಈಶಾನ್ಯ ಮಾರುತ ಕಾಲೇ, ಕಾರ್ತೀಕ ಮಾಸಾಂತ್ಯ ಸಂದರ್ಭೆ,
ಸೂರ್ಯ ರಶ್ಮಿ ಕಡಲೊಡಲ ಸುಡೆ, ಸುಡುಗಾಳಿ ಮೇಲೇರೆ,
ವಾಯುಭಾರ ಕುಸಿದು ತೆರವಾದ ಸ್ಥಳವಾಕ್ರಮಿಸೆ ತಂಗಾಳಿ ನಾಲ್ಕೂ ದಿಕ್ಕಲಿ,
ಗರ್ಭ ಧರಿಸಿದಳಾಗ ಕೊಲ್ಲಿ ಮಾತೆ, ಒಡಲಲಿ ಭ್ರೂಣವ ಹೊತ್ತು,
ತವಕದಿ ಜನ್ಮತಾಳಿ ಕಂದ ಅಂಬೆಗಾಲಿಡೆ ತೀರದೆಡೆ ಮೋಡಗಳ ಹೊತ್ತು,
ಹೆಸರಿಟ್ಟರಾ ಕೂಸಿಗೆ “ಫೆಂಗಲ್” ಎಂದು, ಏಕೆಂದರೆ ಅದು “ನಿರ್ದಯಿ” ಅಂತ ಜನಕೆ ಗೊತ್ತು.
ದಾರಿಯಲಿ ಲಂಕಾಮಾತೆ ಸೆಳೆದಪ್ಪಿ ಕೂಸನು ಮುತ್ತಿನ ಮಳೆಗರೆಯೆ,
ತೋಯಿಸಿಬಿಟ್ಟಿತು ಹಗ್ಗೀಸ್, ಪ್ಯಾoಪರ್ಸ್ ಧರಿಸದ “ನಿರ್ದಯಿ” ಕೂಸು ಭೋರ್ಗರೆದು ಇನ್ನಿಲ್ಲದಂತೆ.
“ಫೆಂಗಲ್” ಅಮುಲ್ ಬೇಬಿಯ ತುಂಟಾಟ ಕಂಡ ಭಾರತಮಾತೆಯ “ಪೊಂಗಲ್ನಾಡು” ಕೈ ಬೀಸಿ ಕರೆಯೆ,
ಒಡನೆ ತಪ್ಪು ಹೆಜ್ಜೆಯನಿಡುತ ತೀರದ ಮಡಿಲೇರಿ ಗಳಗಳನೆ ಅತ್ತು ನಿದ್ರಿಸಿತು ಹೊತ್ತು ಸರಿಯೆ.